ಕೊಡಗು ವಿಶ್ವವಿದ್ಯಾಲಯ

ಕರ್ನಾಟಕ ಸರ್ಕಾರ

ಕುಲಪತಿಗಳ ಸಂದೇಶ

Home

ಕುಲಪತಿಗಳ ಸಂದೇಶ

ಪ್ರಕೃತಿಯ ರಮಣೀಯ ಸೌಂದರ್ಯದಿಂದಲೇ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಭೂರಮೆ ದೇವ ಸನ್ನಿಧಿಯ ಕೊಡಗು ಜಿಲ್ಲೆಯು ‘ಭಾರತದ ಸ್ಕಾಟ್ಲೆಂಡ್’ ಎಂದು ಪ್ರಸಿದ್ಧಿ ಪಡೆದಿದೆ. ಸುಂದರವಾದ ಹಚ್ಚಹಸಿರಿನ ಗುಡ್ಡಗಾಡು ಪ್ರದೇಶದಿಂದ ಕಂಗೊಳಿಸುತ್ತಿರುವ ಈ ಜಿಲ್ಲೆಯು ಶೌರ್ಯ, ಸಾಹಸ, ಸೇನೆ, ಕ್ರೀಡೆ, ಪರಾಕ್ರಮ, ದೇಶಾಭಿಮಾನದ ಹೆಮ್ಮೆಯ ನಾಡು ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.

ಕೊಡಗು ಜಿಲ್ಲೆಯ ಯುವ ಸಮುದಾಯದ ಬಹುಶಿಸ್ತಿನ ಕಲಿಕೆಗೆ ಹಾಗೂ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಗೆ ಉನ್ನತ ಶಿಕ್ಷಣ ಅವಶ್ಯಕ ಹಾಗೂ ಅದು ಎಲ್ಲರಿಗೂ ದೊರಕಬೇಕು ಎಂಬುದು ಈ ನಾಡಿನ ಜನತೆಯ ಹಂಬಲವಾಗಿದ್ದಿತು. ಆ ಪ್ರದೇಶದ ವಿದ್ಯಾರ್ಥಿಗಳ ವೈಯಕ್ತಿಕ ಸ್ವಾವಲಂಬನೆ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು, ಆ ಮೂಲಕ ಸಾಮಾಜಿಕ ಹಾಗೂ ಅಭಿವೃದ್ಧಿಯ ಸಮಾನತೆಗಾಗಿ ಶೈಕ್ಷಣಿಕ ಅಸಮತೋಲನ ನಿರ್ಮೂಲನೆಗೊಳ್ಳುವಂತಾಗಬೇಕೆಂಬ ಸದಾಶಯದೊಂದಿಗೆ ಕೊಡಗು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.

ಕೊಡಗು ವಿಶ್ವವಿದ್ಯಾಲಯವು ವಿವಿಧ ಜ್ಞಾನಶಿಸ್ತುಗಳಲ್ಲಿ, ಸ್ನಾತಕ, ಸ್ನಾತಕೋತ್ತರ ಅಧ್ಯಯನಗಳು ಹಾಗೂ ಶ್ರೇಷ್ಟ ಗುಣಮಟ್ಟದ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುವಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ನೂತನ ಅಧ್ಯಯನ ವಿಷಯಗಳು ಹಾಗೂ ಜ್ಞಾನಶಿಸ್ತುಗಳ ಅಳವಡಿಕೆ ಮತ್ತು ಹೊಸ ಪ್ರಯತ್ನಗಳ ಮೂಲಕ ನಮ್ಮ ಸಾಮರ್ಥ್ಯದಿಂದಲೇ ಶೈಕ್ಷಣಿಕ ರಂಗದ ಸವಾಲುಗಳಿಗೆ ಪ್ರತಿಸ್ಪಂದಿಸುತ್ತಾ ಜ್ಞಾನದ ಶ್ರೇಷ್ಠತೆ ಹಾಗೂ ಸತ್ಯನಿಷ್ಠೆಯನ್ನು ಎತ್ತಿಹಿಡಿಯಲು ವಿಶ್ವವಿದ್ಯಾಲಯವನ್ನು ಸರ್ವತೋಮುಖ ಅಭಿವೃದ್ಧಿಯ ಪಥದೆಡೆಗೆ ಕೊಂಡೊಯ್ಯಬೇಕೆಂಬ ಸದಾಶಯ ನಮ್ಮದಾಗಿದೆ.

ನಮ್ಮ ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗುವಂತಹ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ, ವಿವಿಧ ಧನ ಸಹಾಯ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸಂಶೋಧನಾಧಾರಿತ ಕಲಿಕೆಗೆ ಒತ್ತು ನೀಡುವ ಮೂಲಕ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟೀಯ ಸವಾಲುಗಳಿಗೆ ಸಮಾಧಾನ ಕಂಡುಕೊಳ್ಳುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಲಿದೆ. ಉತ್ತಮ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯ ಕಾರ್ಯ ಚಟುವಟಿಕೆಗಳ ಮುಖಾಂತರ ಬೌದ್ಧಿಕ ಸಾಮರ್ಥ್ಯವನ್ನು ಉತ್ತೇಜಿಸುವಂತಹ ಜ್ಞಾನದ ಕೃಷಿಯನ್ನು ಕೈಗೊಂಡು ನಮ್ಮ ವಿದ್ಯಾರ್ಥಿ ಸಮೂಹವು ಸಮಾಜಕ್ಕೆ ಉತ್ತಮ ನಾಯಕತ್ವ, ದೂರದೃಷ್ಟಿ ಹಾಗೂ ಮಾರ್ಗದರ್ಶನವನ್ನು ಒದಗಿಸುವಂತಹ ವಾತಾವರಣವನ್ನು ನಿರ್ಮಿಸುವತ್ತ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ.

×
ABOUT DULT ORGANISATIONAL STRUCTURE PROJECTS