ಕೊಡಗು ವಿಶ್ವವಿದ್ಯಾಲಯ

ಕರ್ನಾಟಕ ಸರ್ಕಾರ

ವಿಶ್ವವಿದ್ಯಾಲಯದ ಬಗ್ಗೆ

Home

 ಜ್ಞಾನ ಕಾವೇರಿ ಕ್ಯಾಂಪಸ್

ಕೊಡಗು ಮತ್ತು ಸುತ್ತಮುತ್ತಲ ಜಿಲ್ಲೆಗಳ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಉನ್ನತ ದೃಷ್ಟಿಕೋನದೊಂದಿಗೆ ಅಂದಿನ ಕುಲಪತಿಗಳಾದ ಟಿ.ಸಿ. ಶಿವಶಂಕರಮೂರ್ತಿಯವರೊಂದಿಗೆ ಚರ್ಚಿಸಿ ಸ್ನಾತಕೋತ್ತರ ಕೇಂದ್ರಕ್ಕೆ 70.47 ಎಕರೆ ಜಾಗವನ್ನು ಮಂಜೂರು ಮಾಡಿಸಿ ನವೆಂಬರ್ 15, 2010ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಘನ ಉಪಸ್ಥಿತಿಯಲ್ಲಿ ಹಾಗೂ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಇದಾದ 04 ವರ್ಷಗಳಲ್ಲಿ ಸ್ನಾತಕೋತ್ತರ ಕೇಂದ್ರವು ಅತೀ ವೇಗವಾಗಿ ತನ್ನ ಅಸ್ಥಿತ್ವವನ್ನು ಕಂಡುಕೊಂಡು 2014 ಜನವರಿ 07 ರಂದು ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ ಘನ ಉಪಸ್ಥಿತಿಯಲ್ಲಿ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಉದ್ಘಾಟಿಸಲಾಗಿತು.

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚಿಕ್ಕ ಅಳುವಾರದ ಜ್ಞಾನಕಾವೇರಿ ಕ್ಯಾಂಪಸ್‌ನಲ್ಲಿರುವ ಕೊಡಗು ವಿಶ್ವವಿದ್ಯಾಲಯವು ಪ್ರಸ್ತುತ ವಿಜ್ಞಾನ ಸಂಕೀರ್ಣ, ಮಾನವಿಕ ಸಂಕೀರ್ಣ, ಪುರುಷರ ಹಾಗೂ ಮಹಿಳೆಯರ ವಸತಿ ನಿಲಯಗಳು ಹಾಗೂ ವಸತಿಗೃಹ ಕಟ್ಟಡಗಳು ನಿರ್ಮಾಣಗೊಂಡು ಕಾರ್ಯ ನಿರ್ವಹಿಸುತ್ತಿದೆ.

ಇಲ್ಲಿ ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವವಿಜ್ಞಾನ, ಯೋಗವಿಜ್ಞಾನ ವಿಭಾಗಗಳು ಮತ್ತು ವಾಣಿಜ್ಯಶಾಸ್ತ್ರ, ಸಮಾಜಕಾರ್ಯ, ಕನ್ನಡ, ಇತಿಹಾಸ, ರಾಜ್ಯಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಗಣಕವಿಜ್ಞಾನ, ಕೊಡವ ಪ್ರೋಗ್ರಾಂಗಳು ಹಾಗೂ ಡಿಪ್ಲಮೋ ಸರ್ಟಿಫಿಕೇಟ್ ಕೋರ್ಸ್, ಡಿಪ್ಲಮೋ ಇನ್ ಯೋಗಿಕ್ ಸೈನ್ಸ್ ವಿಷಯಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಸರಿಸುಮಾರು 500 ಕ್ಕು ಹೆಚ್ಚು ವಿದ್ಯಾರ್ಥಿಗಳು (ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ) ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಹಾಗೂ ನೂರಾರು ಮಂದಿ ಬೋಧಕ-ಬೋಧಕೇತರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ನೂರಾರು ಕಿ.ಮೀ ದೂರ ಹೋಗಿ ಪೋಷಕರಿಂದ ದೂರ ಉಳಿದು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಬಹು ಹತ್ತಿರದಲ್ಲೇ ಉನ್ನತ ಶಿಕ್ಷಣವನ್ನು ಒದಗಿಸುವ ಸದುದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರವು ಕಳೆದ 09 ವರ್ಷಗಳಿಂದ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಹಾಸನ ಹಾಗೂ ರಾಜ್ಯದ ಇನ್ನಿತರೆ ಜಿಲ್ಲೆಗಳಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ನೆರೆ ರಾಜ್ಯಗಳ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣದ ಸೌಲಭ್ಯವನ್ನು ಒದಗಿಸಲಾಗಿದೆ.

ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆಧುನೀಕೃತ ಪ್ರಯೋಗಾಲಯ, ಅಂತರ್ ಕಾಲೇಜು ಕ್ರೀಡಾ ಚಟುವಟಿಕೆಗಳು, ವಿದ್ಯಾರ್ಥಿನಿಲಯ, ಕ್ಯಾಂಟೀನ್ ಹಾಗೂ ವಾಹನ ಸೌಲಭ್ಯಗಳನ್ನು ಒದಗಿಸಿದೆ. ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನಾರ್ಜನೆಗಾಗಿ ಕೇಂದ್ರದ ಆವರಣದಲ್ಲಿ ಉಚಿತ ವೈಫೈ ಸೌಲಭ್ಯವನ್ನು ನೀಡಿದೆ. ಹಾಗೆಯೇ ಸುರಕ್ಷತೆಯ ದೃಷ್ಟಿಯಿಂದ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಕೂಡ ಅಳವಡಿಸುವುದರ ಜೊತೆಗೆ ಭದ್ರತಾ ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗಿದೆ.

ಸಂಸ್ಥೆಯ ವಿವಿಧ ಕೋರ್ಸ್ಗಳಿಗೆ ಸಂಬಂಧಿಸಿದ ಒಟ್ಟು ಹತ್ತು ಸಾವಿರಕ್ಕು ಅಧಿಕ ಪುಸ್ತಕಗಳು ಹಾಗೂ ಸಾವಿರಕ್ಕೂ ಹೆಚ್ಚು ನಿಯತಕಾಲಿಕೆಗಳು ಲಭ್ಯವಿದೆ. ಉತ್ತಮವಾದ ವಾಚನಾಲಯ ಸೌಲಭ್ಯ ಕೂಡ ಲಭ್ಯವಿದೆ.

ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿ ವಿಜ್ಞಾನ ವಿಭಾಗದಲ್ಲಿನ ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವ ವಿಜ್ಞಾನ, ರಸಾಯನಶಾಸ್ತ್ರ, ಗಣಕ ವಿಜ್ಞಾನ, ಪರಿಸರ ವಿಜ್ಞಾನ, ಸಸ್ಯಶಾಸ್ತ್ರ ವಿಭಾಗಗಳಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ಪ್ರಯೋಗಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ.

ಜೀವರಸಾಯನಶಾಸ್ತ್ರ ಮತ್ತು ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗಗಳಲ್ಲಿ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿದ್ದು, ಅಂತರ್‌ ರಾಷ್ಟೀಯ ಸಂಶೋಧನಾ ವಿದ್ಯಾರ್ಥಿಗಳು ಕೂಡ ವ್ಯಾಸಂಗ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ವಿಭಾಗದಲ್ಲಿ ಈಗಾಗಲೇ ಹಲವಾರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪಿಎಚ್.ಡಿ ಮಹಾಪ್ರಬಂಧಗಳನ್ನು ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಸಹ ಪಡೆದಿದ್ದಾರೆ. ಹಾಗೆಯೇ ವಿವಿಧ ವಿಭಾಗದ ಪ್ರಾಧ್ಯಾಪಕರುಗಳು UGC ಮತ್ತು ಇನ್ನಿತರ ಸಂಸ್ಥೆಗಳಿಂದ ಅನುದಾನ ಪಡೆದುಕೊಂಡು ಸಂಶೋಧನೆಯ ಯೋಜನೆಗಳನ್ನು ಕೈಗೊಂಡಿದ್ದಾರೆ.

ಯುಜಿಸಿ ನಿಯಮಾವಳಿಯಾನುಸಾರ ನಮ್ಮ ಕೇಂದ್ರದಲ್ಲಿ Anti-Ragging Cell, Women’s Cell, SPARSH, Canteen Committee, Human Rights Cell, Student Welfare Office, SC/ST Cell, Village Adoption Programme, Transport Committee, NSS ಹಾಗೂ Swach Bharath Committee ಸೇರಿದ ಒಟ್ಟು ೧೧ ಸಮಿತಿಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿವೆ.

ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದುಕೊಂಡು ಸರ್ಕಾರಿ, ಖಾಸಗಿ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಡಾಕ್ಟರೇಟ್ ಪದವಿಯನ್ನು ಸಹ ಪಡೆದಿದ್ದಾರೆ.

×
ABOUT DULT ORGANISATIONAL STRUCTURE PROJECTS